ಕೀಲುಕುದುರೆ

ಜನಪದ ನೃತ್ಯಗಳಲ್ಲಿ ಒಂದು ಬಗೆಯದಕ್ಕೆ ಬಳಸಲಾಗುವ ಸಾಧನ. ಎಲ್ಲ ದ್ರಾವಿಡ ಭಾಷಾಪ್ರದೇಶಗಳಲ್ಲೂ ಕೀಲುಕುದುರೆಯ ಕುಣಿತ ಹಿಂದಿನಿಂದ ಜನಪ್ರಿಯವಾಗಿದೆ. ಜನಪದ ಕಥೆಗಳಲ್ಲಿ ಸಾಮಾನ್ಯವಾಗಿ ಬರುವ ಕೀಲುಕುದುರೆಯ ಸನ್ನಿವೇಶವನ್ನು ಇಲ್ಲಿ ನೆನೆಯಬಹುದು. ರಾಜಕುಮಾರ ತಾನು ಪ್ರೀತಿಸಿದ ಪ್ರಿಯತಮೆಯನ್ನು ಸಂದರ್ಶಿಸುವ ಸನ್ನಿವೇಶಗಳಲ್ಲಿ ಇಲ್ಲವೆ ಆಕೆಯನ್ನು ಅಪಹರಿಸಿಕೊಂಡು ಹೋಗುವಲ್ಲಿ ಕೀಲುಕುದುರೆಯನ್ನು ಬಳಸುವ ಕಲ್ಪನೆ ರಮ್ಯವಾದುದು. ಏಳು ಉಪ್ಪರಿಗೆ ಅರಮನೆಯ ಮೇಲೆ ಸುರಕ್ಷಿತಳಾಗಿರುವ ರಾಜಕುಮಾರಿಯನ್ನು ಆಕೆಯ ಪ್ರಿಯತಮ ಅಂತರಿಕ್ಷ ಮಾರ್ಗವಾಗಿ ಗುಟ್ಟಾಗಿ ಆಕೆಯ ಸಾಮೀಪ್ಯವನ್ನು ಸೇರಲು ಕೀಲುಕುದುರೆಯನ್ನು ಉಪಯೋಗಿಸುತ್ತಾನೆ. ಇಂಥ ಅನೇಕ ಸನ್ನಿವೇಶಗಳಲ್ಲಿ ಈ ಕೀಲುಕುದುರೆ ಮಾಯಾ ಜಗತ್ತಿನ ಕಾಲ್ಪನಿಕ ಪಾತ್ರವಾಗಿ ಬಹಳ ಸುಂದರವಾಗಿ ಬೆಳೆದು ಬಂದಿದೆ. ಇಂದಿನ ಜನಪದ ಕಲಾರಂಗದಲ್ಲಿ ಕೀಲುಕುದುರೆಯನ್ನು ನೃತ್ಯಕ್ಕೆ ಹೇಗೆ ಅಳವಡಿಸಿದ್ದರೆನ್ನುವುದನ್ನು ಪರಿಶೀಲಿಸಬಹುದು.

ಕೀಲುಗಳಿಂದ ಜೋಡಿಸಲ್ಪಟ್ಟ ಈ ಕುದುರೆಯ ರಚನೆಯೂ ಒಂದು ಅಪೂರ್ವ ಜನಪದ ಕಲೆ. ಶಿಲ್ಪ ಮತ್ತು ಚಿತ್ರಗಳ ಸಾಮರಸ್ಯವನ್ನು ಇಲ್ಲಿ ಕಾಣಬಹುದು. ಕೀಲುಕುದುರೆಯ ಹೊಟ್ಟೆಯ ಭಾಗವನ್ನು ಕಾಲುಗಳನ್ನು ಬಿಟ್ಟು ಉಳಿದ ದೇಹ ಭಾಗವನ್ನು ಅಂದರೆ ಎದೆ ಮತ್ತು ಹಿಂಭಾಗವನ್ನು ಕುದುರೆಯ ಆಕಾರದಂತೆ ಬಿದುರಿನ ತೆಳುವಾದ ದಬ್ಬೆಗಳಿಂದ ಹೆಣೆದು ರಚಿಸಿಕೊಳ್ಳುತ್ತಾರೆ. ಮೇದರವನ ವಂಶ ಪಾರಂಪರ್ಯವಾದ ಕಲೆ ಇದು. ತಲೆ ಮತ್ತು ಕತ್ತನ್ನು ಮಾತ್ರ ಆಯಾ ಪ್ರದೇಶದ ಗ್ರಾಮಕಲಾವಿದರು ರಚಿಸಿಕೊಡುತ್ತಾರೆ. ಅಕ್ಕಸಾಲಿ, ರಂಗಾರೆಯವ ಇಲ್ಲವೆ ಚಿತ್ರಗಾರ ಕುದುರೆಯ ತಲೆಭಾಗವನ್ನು ರೂಪಿಸಿಕೊಡುತ್ತಾನೆ. ಟೊಳ್ಳಾದ ಕತ್ತನ್ನುಳ್ಳ ಕುದುರೆಯ ತಲೆಯನ್ನು ಕಾಗದದ ಹಿಟ್ಟಿನಿಂದ ರಚಿಸಲಾಗುತ್ತದೆ. ಅನಂತರ ಅದಕ್ಕೆ ಸ್ವಾಭಾವಿಕ ಬಣ್ಣ ಹಚ್ಚಲಾಗುತ್ತದೆ. ಕೀಲನ್ನು ಅಳವಡಿಸಿರುತ್ತಾರಾಗಿ ಕುಣಿವಾಗ ಕುದುರೆಯ ನಾಲಗೆ ಮೇಲೆ ಕೆಳಗೆ ಆಡುತ್ತದೆ. ತಲೆಯನ್ನು ಬಿದುರಿನ ಮುಂಡಕ್ಕೆ ಸೇರಿಸಿ ಬಿಗಿಯುತ್ತಾರೆ.

ಕೀಲುಕುದುರೆಯನ್ನು ನಡೆಸುವ ವ್ಯಕ್ತಿ ರಾಜನಂತೆ ವೇಷಭೂಷಣಗಳನ್ನು ಧರಿಸಿಕೊಂಡು ತನ್ನ ಎರಡು ಕಾಲುಗಳಿಗೂ ಒಂದೊಂದು ಪುಟ್ಟನೆಯ ಮರಗಾಲುಗಳನ್ನು ಕಟ್ಟಿಕೊಂಡಿರುತ್ತಾನೆ. ಸಾಮಾನ್ಯವಾಗಿ ಇವು ಎರಡು ಅಡಿ ಉದ್ದವೂ ಹಗುರವೂ ಆದ ಮರದಿಂದಾದವು. ಪಾದಗಳು ಕೂರಲು ಅನುಗುಣವಾಗಿ ಇರುವ ಈ ಮರಗಾಲುಗಳ ಮೇಲುಭಾಗವನ್ನು ಕಾಲುಗಳಿಗೆ ನುಣುಪಾದ ನೂಲಿನಿಂದ ಬಿಗಿದಿರುತ್ತಾರೆ. ಸವಾರ ಕುದುರೆಯ ಹೊಟ್ಟೆಯಲ್ಲಿರುವ ರಂಧ್ರದಿಂದ ತೂರಿ ನಿಲ್ಲುತ್ತಾನೆ. ಕುದುರೆಗೆ ಹೊದಿಸುವ ಗೌನು ಬಣ್ಣದ್ದಾಗಿದ್ದು ಅದರ ದೇಹವನ್ನು ಸವಾರನ ಮರಗಾಲುಗಳನ್ನೂ ಮುಚ್ಚುವಷ್ಟು ಉದ್ದನಾಗಿರುತ್ತದೆ. ಹೀಗೆ ಕುದುರೆಯ ಬೆನ್ನಿನ ನಡುವೆ ಸೇರಿ ನಿಂತಿರುವ ಸವಾರ ತನ್ನ ಎರಡು ಹೆಗಲುಗಳಿಗೆ ಆ ದಬ್ಬೆಯ ಕುದುರೆಯ ದೇಹವನ್ನು ಬಿಗಿದುಕೊಳ್ಳುತ್ತಾನೆ. ನೃತ್ಯಮಾಡುವಾಗ ಕುದುರೆಯ ಲಗಾಮುಗಳನ್ನು ಕೈಲಿ ಹಿಡಿದು ಅದರ ತಲೆಬಾಲಗಳನ್ನು ಹಿಂದು ಮುಂದು ಮಾಡಿ ಸಹಜಭಂಗಿಯಲ್ಲಿ ನೃತ್ಯ ಮಾಡುತ್ತಾನೆ. ಸವಾರನ ಕಾಲಿನ ಮತ್ತು ಕೈಗಳು ಒನಪು ವೈಯಾರಗಳಿಂದ, ಚಾತುಚಕ್ಯತೆಗಳಿಂದ ಆತ ಕುಳಿತಿರುವುದು ಜೀವಂತ ಕುದುರೆ ಎಂದಂತೆ ಭಾಸವಾಗುತ್ತದೆ.

 ಕೀಲುಕುದುರೆಯ ನೃತ್ಯ ಕನ್ನಡನಾಡಿನಲ್ಲಿ, ಆಂಧ್ರ, ತಮಿಳು ಮತ್ತು ಕೇರಳ ಮುಂತಾದ ನೆರೆಪ್ರಾಂತ್ಯಗಳಲ್ಲಿ ಉಳಿದು ಬಂದಿದೆ. ದೇವರ ಉತ್ಸವಗಳಲ್ಲಿ, ಇಲ್ಲವೆ ಮದುವೆಯ ಮೆರವಣಿಗೆಗಳಲ್ಲಿ ಅಥವಾ ವಿಶೇಷ ಉತ್ಸವಗಳಲ್ಲಿ ಈ ನೃತ್ಯದವರನ್ನು ಕರೆಸುವ ರೂಢಿ ಇದೆ. ನೃತ್ಯದಲ್ಲಿ ಸಾಮಾನ್ಯವಾಗಿ ರಾಜ ರಾಣಿಯರಿಗೆಂದು ಎರಡು ಕುದುರೆಗಳಿರುತ್ತವೆ. ವಾದ್ಯಮೇಳದೊಂದಿಗೆ ಈ ನೃತ್ಯ ಬಹು ಆಕರ್ಷಕವಾಗಿ ತೋರುತ್ತದೆ.           

  (ಪಿ.ಆರ್.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ